ಪ್ರಳಯ - 
ಸೃಷ್ಟಿಗೆ ಪ್ರತಿಯಾದ ಕಾರ್ಯ, ಇದನ್ನು ನಾಶ ಲಯ, ಪ್ರತಿಸರ್ಗ ಎಂದೆಲ್ಲ ಕರೆವುದಿದೆ (ಡೆಲ್ಯೂಜ್) ಇದರ ವಿವರ ಪ್ರಾಯಶಃ ಎಲ್ಲ ಪುರಾಣಗಳಲ್ಲೂ ಉಂಟು. ಇದು ನಾಲ್ಕು ಬಗೆ.

(1) ಪ್ರತಿದಿನ ಸಾವಿರಾರು ಪ್ರಾಣಿಗಳು ರೋಗಾದಿಗಳಿಗೆ ತುತ್ತಾಗಿ ಸಾಯುತ್ತಿರುವುದಕ್ಕೆ ನಿತ್ಯಪ್ರಳಯವೆಂದು ಹೆಸರು.

(2) ಚತುರ್ಮುಖ ಬ್ರಹ್ಮನ ಒಂದು ಹಗಲಾದ ಕಲ್ಪ ಮುಗಿದಾಗ ನಡೆಯುವ ವಿನಾಶಕ್ಕೆ ನೈಮಿತ್ತಿಕ ಅಥವಾ ಅವಾಂತರ ಪ್ರಳಯವೆಂದು ಹೆಸರು. ಈ ಸಮಯದಲ್ಲಿ ಭೂಮ್ಯಾದಿ ಮೂರು ಲೋಕಗಳು ನಾಶ ಹೊಂದುತ್ತವೆ. ಕಡೆಯ ಮೂರು ಲೋಕಗಳು ಹಾಗೆಯೇ ಇರುತ್ತವೆ. ನಡುವಿನ ಮಹರ್ಲೊಕಜನಶೂನ್ಯವಾಗಿರುತ್ತದೆ.

(3) ಬ್ರಹ್ಮನ ದ್ವಿಪರಾರ್ಧವೆಂಬ ಆಯುಸ್ಸು ಮುಗಿಯುವಾಗ ಸಮಸ್ತಲೋಕಗಳೂ ಸಮಸ್ತ ಪದಾರ್ಥಗಳೂ ಹೊಂದುವ ನಾಶಕ್ಕೆ ಪ್ರಾಕೃತ ಪ್ರಳಯ ಅಥವಾ ಮಹಾಪ್ರಳಯವೆಂದು ಹೆಸರು. ಉಪನಿಷತ್ತುಗಳಲ್ಲೂ ಇದರ ವಿವರಣೆಯಿದೆ. ಈ ಸಮಯದಲ್ಲಿ ಸ್ಥೂಲ ಮತ್ತು ಸೂಕ್ಷ್ಮವಾದ ಎಲ್ಲ ಕಾರ್ಯಪದಾರ್ಥಗಳೂ ನಾಶಹೊಂದಿ ಮೂಲಪ್ರಕೃತಿಯೆಂಬ ಪರಮ ಸೂಕ್ಷ್ಮಾವಸ್ಥೆಯನ್ನು ಹೊಂದುತ್ತವೆ. ಪ್ರಕೃತಿಯೂ ಜೀವರಾಶಿಗಳೂ ಪರಮಾತ್ಮನಲ್ಲಿ ಸೇರಿಹೋಗಿ ಅವನಿಂದ ಬೇರೆಯಾಗಿ ಕಾಣದಾಗುತ್ತವೆ.

(4) ಒಬ್ಬೊಬ್ಬ ಜೀವನೂ ವೇದಾಂತಶಾಸ್ತ್ರದಲ್ಲಿ ಉಪದೇಶಿಸಲ್ಪಟ್ಟ ಕರ್ಮ, ಜ್ಞಾನ, ಭಕ್ತಿ ಮುಂತಾದ ಉಪಾಯಗಳನ್ನು ಅನುಷ್ಠಿಸಿ, ಅದರಿಂದ ಪ್ರಕೃತಿ ಸಂಬಂಧವನ್ನು ಕಿತ್ತೊಗೆದು ಪುನಃ ಸೃಷ್ಟಿ ಪ್ರಳಯಗಳಿಗೆ ಆಳಾಗದೆ, ಮೋಕ್ಷಸಾಮ್ರಾಜ್ಯವನ್ನು ಹೊಂದುವುದಕ್ಕೆ ಆತ್ಯಂತಿಕ (ಎಂದರೆ ಕಡೆಯ) ಪ್ರಳಯವೆಂದು ಹೆಸರು.

ಬೈಬಲ್ಲಿನ ಮೊದಲ ಒಡಂಬಡಿಕೆಯಲ್ಲಿ ಜಗತ್ತಿಗೊದಗಿದ ಮಹಾಪ್ರಳಯದ ಕಥೆ ಇದೆ. ಅಧರ್ಮದಲ್ಲಿ ಅದ್ದಿಹೋದ ಮಾನವಕೋಟಿಯನ್ನು ನಿರ್ನಾಮ ಮಾಡಲು ದೇವರು ನಲವತ್ತು ದಿನ ಹಗಲು ರಾತ್ರಿ ಎನ್ನದೆ ನಿರಂತರವಾಗಿ ಮಳೆಗರೆದನಂತೆ. ಆ ಪ್ರಳಯದಲ್ಲಿ ನೋವನ ಸಂಸಾರ ಮತ್ತು ಅವನ ದೋಣಿಯಲ್ಲಿದ್ದರೆ ಕೆಲವು ಪ್ರಾಣಿಗಳನ್ನುಳಿದಂತೆ ಇಡೀ ಪ್ರಪಂಚವೇ ನಾಶವಾಯಿತಂತೆ.

ಭಾರತೀಯ ಪುರಾಣಗಳಲ್ಲಿನ ಹಿರಣ್ಯಾಕ್ಷನೆಂಬ ಅಸುರನ ಕಥೆ ಮಹಾಪ್ರಳಯಕ್ಕೆ ಇನ್ನೊಂದು ನಿದರ್ಶನ, ಪ್ರಬಲನಾದ ಆ ರಾಕ್ಷಸ ದೇವಮಾನವರನ್ನು ಲೆಕ್ಕಿಸದೆ ಪ್ರಬಲನಾಗಿ ಭೂಮಿಯನ್ನು ಮೂಲಜಲಧಿಯಲ್ಲಿ ಒಮ್ಮೆ ಮುಳುಗಿಸಿದನಲ್ಲದೆ ಸ್ವರ್ಗವನ್ನು ಬಿರುಗಾಳಿಯಿಂದ ನಿರ್ನಾಮ ಮಾಡುವುದಾಗಿ ಹೆದರಿಸಿದ. ಆಗ ವಿಷ್ಣು ವರಾಹಾವತಾರವೆತ್ತಿ ಸಾಗರದಲ್ಲಿ ಮುಳುಗಿ ರಾಕ್ಷಸನೊಂದಿಗೆ ಸಾವಿರ ವರ್ಷ ಯುದ್ಧ ಮಾಡಿ ಅವನನ್ನು ಸಂಹರಿಸಿ ಭೂಮಿಯನ್ನು ನೀರಿನ ಆಳದಿಂದ ಹೊರತಂದ ಇಂಥದೇ ಒಂದು ಕಥೆ ಬ್ರಾಹ್ಮಣಗಳಲ್ಲಿದೆ. ಸಹಸ್ರಬಾಹುವಾದ ಘೋರ ವರಾಹರೂಪವನ್ನು ತಾಳಿದ ಪ್ರಜಾಪತಿ ಬ್ರಹ್ಮ ಜಲಸಮಾಧಿಯಾದ ಭೂಮಿಯನ್ನು ಮೇಲಕ್ಕೆತ್ತಿದನಂತೆ.
(ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ